ಕಾರ್ದೊಗಲು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಆಹಾರದಲ್ಲಿ ಬಿ ವಿಟಮಿನ್ನಿನ ಪ್ರಮುಖ ಅಂಶವಾದ ನಿಕೊಟಿನಿಕ್ ಆಮ್ಲದ ಕೊರತೆಯಿಂದ ತೋರಿಬರುವ ಒಂದು ಬಗೆಯ ಚರ್ಮವ್ಯಾಧಿ (ಪೆಲ್ಲಗ್ರ). ಈ ಕಾಯಿಲೆಯಲ್ಲಿ ಚರ್ಮ ಮತ್ತು ಲೋಳೆಪೊರೆಯ ಉರಿ, ಭೇಧಿ ಮತ್ತು ಮಾನಸಿಕ ಬದಲಾವಣೆಗಳು ತೋರಿಬರುವುವಲ್ಲದೇ ಚರ್ಮ ದಪ್ಪನಾಗಿ ಒಣಗಿ ಒರಟಾಗುತ್ತದೆ. ಅಂತೆಯೇ ಈ ವ್ಯಾಧಿಗೆ ಕಾರ್ದೊಗಲು ಎಂಬ ಹೆಸರು ಬಂದಿದೆ. ಈ ರೋಗದ ವಿವರಣೆಯನ್ನು ಸ್ಪೇನಿನ ವೈದ್ಯ ಕಾಸಲ್ ನೀಡಿದ (1730); ಮುಂದೆ ಇಟಲಿಯ ವೈದ್ಯ ಪ್ರಪೋಲಿ ಇದಕ್ಕೆ ಪೆಲ್ಲಗ್ರ ಎಂಬ ಹೆಸರನ್ನಿತ್ತ (1771). ಈ ರೋಗ ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರಚಲಿತವಿದೆ; ಸಾಧಾರಣವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚು. ಬಡತನದಲ್ಲಿ ಜೀವನ ನಡೆಸುತ್ತ ನ್ಯೂನ ಆಹಾರ ಸೇವನೆ ಮಾಡುವ ರೈತಾಪಿ ಜನಗಳಲ್ಲಿ ಈ ರೋಗ ಸಾಮಾನ್ಯ. ಮುಸುಕಿನ ಜೋಳ ಇಲ್ಲವೆ ಬಿಳಿ ಜೋಳ ಅವರ ಪ್ರಮುಖ ಆಹಾರ. ಅದರಲ್ಲಿ ಸಸಾರಜನಕ ವಸ್ತುಗಳ ಕೊರತೆ ಉಂಟು. ಮುಸುಕಿನ ಜೋಳದಲ್ಲಿ ನಿಕೊಟಿನಿಕ್ ಆಮ್ಲದ ಪ್ರಮಾಣ ಹೆಚ್ಚಿದ್ದರೂ ಅದು ದೇಹದ ಉಪಯೋಗಕ್ಕೆ ಬಾರದ ರೀತಿಯಲ್ಲಿದೆ. ಬಿಳಿ ಜೋಳದಲ್ಲಿ ಅಮೈನೋ ಆಮ್ಲ (ಲೂಸಿನ್) ಹೆಚ್ಚು ಪ್ರಮಾಣದಲ್ಲಿದ್ದು ಅದು ಟ್ರಿಪ್ಟೋಫೇನ್ ನಿಕೊಟಿನಿಕ್ ಆಮ್ಲದ ತಯಾರಿಕೆಗೆ ಅಡ್ಡಿಯನ್ನುಂಟುಮಾಡಿ ಕಾರ್ದೊಗಲಿನ ಗುಣಲಕ್ಷಣಗಳ ಬೆಳೆವಣಿಗೆಗೆ ಅನು ಮಾಡಿಕೊಡುತ್ತದೆ. ನಿಕೊಟಿನಿಕ್ ಆಮ್ಲ ಮತ್ತು ಸಾರಜನಕ ವಸ್ತುಗಳ ಸೇವನೆ ಈ ರೋಗವನ್ನು ತಡೆಗಟ್ಟುವಲ್ಲಿ ಸಹಾಯಕಾರಿ. ಈ ರೋಗ ದೀರ್ಘಾವಧಿ ಕಾಲ ಇರಬಲ್ಲುದು. ಬುದ್ಧಿಮಾಂದ್ಯ, ಭೇದಿ, ಕೆಂಪಡರಿದ ಚರ್ಮ ತೋರಿಬರುತ್ತವೆ. ಪ್ರಾರಂಭದ ದಿಶೆಯಲ್ಲಿ ಚರ್ಮ ಕೆಂಪಡರಿ ಉರಿಯನ್ನುಂಟುಮಾಡುವುದು. ದಿನಗಳೆದಂತೆ ಚರ್ಮ ಒರಟಾಗುತ್ತದೆ. ಈ ಬದಲಾವಣೆಗಳು ಸೂರ್ಯಪ್ರಕಾಶಕ್ಕೆ ಈಡಾಗುವ ಚರ್ಮದ ಪ್ರದೇಶಗಳಾದ ಕೈ ಮತ್ತು ಪಾದದ ಮೇಲ್ಭಾಗ, ಮುಂಗೈ, ಮುಂಗಾಲು, ಕಣ್ಣಿನ ಕೆಳಗಿನ ಮುಖದ ಪಾತರಗಿತ್ತಿಯ ಪ್ರದೇಶ ಮತ್ತು ಕುತ್ತಿಗೆಯ ಚರ್ಮ ಇಲ್ಲಿ ಹೆಚ್ಚು. ಅಲ್ಲಿ ಚರ್ಮ ಕೆಂಪಡರಿ ಉಬ್ಬಿ ತುರಿಕೆಯನ್ನುಂಟುಮಾಡುತ್ತದೆ. ದಿನಕಳೆದಂತೆ ಚರ್ಮ ಒಣಗಿ ಒರಟಾಗಿ ಒಡೆದು ಕಂದು ಇಲ್ಲವೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇವುಗಳಲ್ಲದೆ ಬಾಯಲ್ಲಿ ಮುಗುಳು, ಹುಣ್ಣು ತೋರಿಬಂದು ಕಾರ ತಿನ್ನಲು ಆಗುವುದಿಲ್ಲ. ನಾಲಗೆ ಹಸಿ ಮಾಂಸದಂತೆ ಕೆಂಪಾಗುತ್ತದೆ. ರೋಗಿ ಶೀಘ್ರಕೋಪಿಯಾಗಬಹುದು, ಚಿತ್ತಸ್ಥೈರ್ಯ ಕಳೆದುಕೊಂಡು ಹುಚ್ಚುಹುಚ್ಚಾಗಿ ಮಾತಾಡಬಹುದು.

 ನಿಕೊಟಿನೇಮೈಡನ್ನು 100 ಮಿಲಿಗ್ರಾಂನಂತೆ ದಿನದಲ್ಲಿ ನಾಲ್ಕು ಬಾರಿ ಸೇವಿಸುವುದರಿಂದ ರೋಗ ಗುಣಮುಖವಾಗುವುದು. ಈ ಔಷಧಿ ಜಠರದಿಂದ ಬೇಗ ಹೀರಲ್ಪಡುವುದು. ಇದರೊಂದಿಗೆ ಆಹಾರದಲ್ಲಿ ಸಸಾರಜನಕ ಪದಾರ್ಥಗಳ (ಪ್ರೋಟೀನುಗಳು) ಸೇವನೆಯೂ ಅಗತ್ಯ. ಇದರಿಂದಾಗಿ ಚರ್ಮದ ಉರಿ, ಭೇದಿ ಮೊದಲಾದ ಬೇನೆಗಳು ತೀವ್ರ ಮಣಿಯುವುವು. ಮಾನಸಿಕ ಪರಿಸ್ಥಿತಿ ನಿಧಾನಗತಿಯಲ್ಲಿ ಉತ್ತಮಗೊಳ್ಳುವುದು.

(ಪಿ.ಎಸ್.ಎಸ್.)